ಪೆಟೀ, ಅಲೆಕ್ಸಿಸ್ ತೆರೀಸ್
	1791-1820. ಫ್ರಾನ್ಸಿನ ಭೌತವಿಜ್ಞಾನಿ. ಡ್ಯೂಲಾಂಗ್ ಮತ್ತು ಪೆಟೀ ನಿಯಮದಿಂದ ಪ್ರಸಿದ್ಧನಾದವ. 1791 ಅಕ್ಟೋಬರ್ 2ರಂದು ಫ್ರಾನ್ಸಿನ ವೆಸೋಲ್ ಎಂಬ ನಗರದಲ್ಲಿ ಜನಿಸಿದ. ಇವನ ಪ್ರತಿಭೆ ವಿದ್ಯಾರ್ಥಿಯಾಗಿದ್ದಾಗಲೇ ಬೆಳಕಿಗೆ ಬಂದಿತು. ವಯಸ್ಸು ಕೇವಲ ಹತ್ತು ಆಗಿದ್ದಾಗ ಇಕೊಲೆ ಪಾಲಿಟೆಕ್ನಿಕ್ ಸಂಸ್ಥೆಯ ಪ್ರವೇಶಾರ್ಹತಾಪರೀಕ್ಷೆಯಲ್ಲಿ ತೇರ್ಗಡೆಯಾದ. ಆದರೆ ಹದಿನಾರರ ತನಕವೂ ಅಲ್ಲಿ ಪ್ರವೇಶ ಸಿಗಲಿಲ್ಲ. ಮುಂದೆ ಅಲ್ಲಿ ವಿದ್ಯಾರ್ಥಿಯಾಗಿ ಪ್ರವೇಶಿಸಿ ಅದೇ ಸಂಸ್ಥೆಯಲ್ಲಿ ಉಪಾಧ್ಯಾಯನಾಗಿ ನೇಮಕಗೊಂಡ.

	ಕೆಲವು ವರ್ಷಗಳ ತರುವಾಯ ಪ್ಯಾರಿಸ್ಸಿನ ಲೇಸಿ ಬೋನಪಾರ್ಟ್ ಎಂಬಲ್ಲಿ ಭೌತ ವಿಜ್ಞಾನ ವಿಭಾಗದ ಪ್ರಾಧ್ಯಾಪಕನಾಗಿ ನೇಮನಪಡೆದ.  ಒಳ್ಳೆಯ ಉಪಾಧ್ಯಾಯನೆಂಬ ಹೆಸರು ಪಡೆದು ಪುನಃ ಇಕೋಲೆ ಪಾಲಿಟೆಕ್ನಿಕ್‍ನಲ್ಲಿ ಹ್ಯಾಸನ್‍ಫ್ರಾಟ್ಸ್ ಭೌತಶಾಸ್ತ್ರದ ಪೀಠವನ್ನು ಅಲಂಕರಿಸಿದ.  ಅದೇ ವರ್ಷದಲ್ಲಿ ಡ್ಯೂಲಾಂಗ್ ಎಂಬ ಮತ್ತೊಬ್ಬ ವಿಜ್ಞಾನಿಯೊಡಗೂಡಿ ಅನಿಲ ಉಷ್ಣತಾಮಾಪಕದ ಮತ್ತು ನ್ಯೂಟನ್ನನ ಶೀತಲನ ನಿಯಮ ವಿಚಾರವಾಗಿ ವಿನಿಮಯ ನಡೆಸಿದ, ಪರಿಣಾಮವಾಗಿ ಡ್ಯೂಲಾಂಗ್ ಮತ್ತು ಪೆಟೀ ನಿಯಮ ಪ್ರಕಟವಾಯಿತು.  ಈ ನಿಯಮದ ಪ್ರಕಾರ ವಸ್ತುವಿನ ಪರಮಾಣು ತೂಕ ಮತ್ತು ಗ್ರಾಹ್ಯೋಷ್ಣಗಳ ಗುಣಲಬ್ಧ ನಿಯತಾಂಕವಾಗಿರುತ್ತದೆ.  ಇದರ ಮೌಲ್ಯ 6.2. ಪೆಟೀ ಭೌತವಿಜ್ಞಾನವಲ್ಲದೆ ಗಣಿತಶಾಸ್ತ್ರದಲ್ಲೂ ಪರಿಣತನಾಗಿದ್ದ.  ಇವನ ಕೊನೆಯ ದಿನಗಳು ಅಷ್ಟಾಗಿ ಸುಗಮವಾಗಿರಲಿಲ್ಲ.  1817 ರಲ್ಲಿ ಪತ್ನಿಯನ್ನು ಕಳೆದುಕೊಂಡ.  ಕ್ಷಯ ರೋಗಗ್ರಸ್ತನಾಗಿ 1820ರ ಜೂನ್ 20ರಂದು ಅಸುನೀಗಿದ.
(ಬಿ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ